ರಾಯಭಾರಿ ಒಂದು ದೇಶದ ಅತ್ಯುನ್ನತ ರಾಜತಾಂತ್ರಿಕ ಪ್ರತಿನಿಧಿಯಾಗಿ ಬೇರೊಂದು ದೇಶದಲ್ಲಿರುವ ವ್ಯಕ್ತಿ (ಅಂಬಾಸೆಡರ್).

ರಾಜನೀತಿಯಲ್ಲಿ ಹೆಚ್ಚು ಪರಿಶ್ರಮವುಳ್ಳ ವ್ಯಕ್ತಿಯನ್ನು ರಾಯಭಾರಿಯಾಗಿ ಯೋಗ್ಯ ತಾಪತ್ರಗಳೊಡನೆ ವಿದೇಶಗಳಿಗೆ ಕಳುಹಿಸಿಕೊಡಲಾಗುತ್ತದೆ. ಸಂಪೂರ್ಣ ಅಧಿಕಾರವುಳ್ಳ ಆತ ತನ್ನ ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುತ್ತಾನೆ. ಕೆಲವೊಮ್ಮೆ ರಾಯಭಾರಿಯನ್ನು ಸಂಯುಕ್ತ ರಾಷ್ಟ್ರ ಸಂಘಕ್ಕೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಂದರ್ಭಕ್ಕನುಗುಣವಾಗಿ ವಿಶೇಷವಾದ ಅಥವಾ ತಾತ್ಕಾಲಿಕವಾದ ನಿಯೋಜನೆಯೊಂದಿಗೆ ನೇಮಿಸಲಾಗುವುದು. ಒಂದು ದೇಶದ ವಿದೇಶಾಂಗ ನೀತಿಯನ್ನು ಮತ್ತೊಂದು ದೇಶದಲ್ಲಿ ಅನುಷ್ಠಾನಕ್ಕೆ ತರುವಂಥ ನಿರ್ವಹಣಾಕುಶಲತೆ ಈ ರಾಯಭಾರಿಗೆ ಸೇರಿದ್ದು. ತಮ್ಮ ಸರ್ಕಾರದ ಅಭಿಪ್ರಾಯಗಳನ್ನು ಇತರ ದೇಶಗಳ ಸರ್ಕಾರಗಳಿಗೆ ಸರಿಯಾಗಿ ಅರಿವುಂಟುಮಾಡುವಲ್ಲಿ ರಾಯಭಾರಿಗಳ ವ್ಯಕ್ತಿತ್ವ ಮತ್ತು ಬುದ್ಧಿ ಕೌಶಲ, ಚತುರತೆ - ಕೆಲಸ ಮಾಡುತ್ತದೆ. ಯಾವ ದೇಶಕ್ಕೆ ರಾಯಭಾರಿಗಳನ್ನು ನೇಮಿಸಲಾಗುವುದೋ ಆ ದೇಶದ ಭಾಷೆ ಮತ್ತು ಇತರ ಅರಿವು ರಾಯಬಾರಿಗಳಿಗೆ ಇರಬೇಕಾಗುತ್ತದೆ. ಇದು ಆತನ ಸಂಧಾನಗಳಿಗೆ ಹಾಗೂ ಪರಸ್ಪರ ವೈಮನಸ್ಯಗಳನ್ನು ಹೋಗಲಾಡಿಸುವುದಕ್ಕೆ ಮತ್ತು ತಮ್ಮ ಸರ್ಕಾರದ ನೀತಿಗಳ ಅನುಷ್ಠಾನಕ್ಕೆ ನೆರವಾಗುವುದು.

ರಾಯಭಾರಿಗಳ ಮೂಲಕ ಒಂದು ದೇಶದ ಗುರಿ ಸಾಧನೆಗಾಗಿ ರಾಜತಾಂತ್ರಿಕ ಸಂಧಾನ ನಡೆಸುವ ಕಲೆ ಪ್ರಾಚೀನವಾದದ್ದು. ಮಾನವರು ತಮ್ಮ ಅಭಿಪ್ರಾಯಗಳಿಗೆ ಹೋರಾಟ ನಡೆಸುವುದಕ್ಕೆ ಬದಲಾಗಿ ಅಂಗೀಕಾರಾರ್ಹವಾದ ಪರಿಹಾರಗಳನ್ನು ಪಡೆಯಲು ನಿರ್ಧರಿಸಿದಾಗ ರಾಯಭಾರಿ ಗ್ರೀಕ್ ದೇಶದ ಮೆಗಾಸ್ತನೀಸ್. ಈತ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಆಸ್ಥಾನಕ್ಕೆ ಬಂದಿದ್ದ. ಭಾರತದ ರಾಮಾಯಣ ಹಾಗೂ ಮಹಾಭಾರತಗಳು ರಾಜತಾಂತ್ರಿಕ ಸಂಧಾನಗಳ ಮೂಲಕ ಮಾತುಕತೆ ನಡೆಸುವಿಕೆಯ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲುತ್ತವೆ. ರಾಮಾಯಣದಲ್ಲಿ ಲಂಕಾಧಿಪತಿ ರಾವಣನ ಆಸ್ಥಾನಕ್ಕೆ ರಾಮದೂತನಾದ ಹನುಮಂತ, ಮಹಾಭಾರತದಲ್ಲಿ ಕೌರವರ ಆಸ್ಥಾನಕ್ಕೆ ಪಾಂಡವರ ರಾಯಭಾರಿಯಾಗಿ ಹೋದ ಶ್ರೀಕೃಷ್ಣ - ಇವರುಗಳನ್ನು ಉದಾಹರಿಸಬಹುದು. ಕೌಟಿಲ್ಯ (ಕ್ರಿ.ಪೂ. 4ನೆಯ ಶತಮಾನ) ತನ್ನ ಅರ್ಥಶಾಸ್ತ್ರದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವುದಕ್ಕೆ ವ್ಯಾಪಕವಾದ ನಿಯಮಗಳನ್ನು ಹಾಗೂ ಸಾಮ-ದಾನ-ಭೇದ-ದಂಡ ಎಂಬ ಸಿದ್ದಾಂತಗಳನ್ನೂ ನೀಡಿದ್ದಾನೆ. ಇಂದಿಗೂ ಇದು ರಾಯಭಾರ ಕೌಶಲದ ಮೂಲಾಧಾರವಾಗಿ ಉಳಿದಿದೆ. ಭಾರತದ ಇತಿಹಾಸದುದ್ದಕ್ಕೂ ಇಂಥ ಹಲವಾರು ನಿದರ್ಶನಗಳು ನಮಗೆ ಕಂಡುಬರುತ್ತವೆ. ಕರ್ನಾಟಕದ ಇಮ್ಮಡಿ ಪುಲಿಕೇಶಿ ಪರ್ಶಿಯ, ಚೀನಗಳಿಗೆ ತನ್ನ ರಾಯಭಾರಿಗಳನ್ನು ಕಳಿಸಿದ್ದರೆ ಬಾದಷಾಹ ತನ್ನ ರಾಯಭಾರಿಯನ್ನು ಕರ್ನಾಟಕಕ್ಕೆ ಕಳಿಸಿದ್ದ ವಿಷಯ ಅಜಂತಾಗುಹೆಗಳ ವರ್ಣಚಿತ್ರಗಳಿಂದ ತಿಳಿದುಬರುತ್ತದೆ. ಮಧ್ಯಯುಗೀನ ಯರೋಪಿನಲ್ಲಿ ಪೋಪನ ಆಸ್ಥಾನಕ್ಕೆ ಯುರೋಪಿನ ಹಲವಾರು ರಾಜರು ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದುದು ಇತಿಹಾಸದಲ್ಲಿ ಕಂಡುಬರುತ್ತದೆ. 17ನೆಯ ಶತಮಾನದವರೆಗೆ ಒಂದು ನಿರ್ದಿಷ್ಟ ಕಾರ್ಯ ನಿರ್ವಹಣೆಗಾಗಿ ರಾಯಭಾರಿಗಳನ್ನು ನೇಮಿಸುವುದರ ಮೂಲಕ ಅಂತಾರಾಷ್ಟ್ರೀಯ ಸಂಬಂಧಗಳನ್ನು ಮುಂದುವರೆಸಲಾಗುತ್ತದೆ. ಈ ಕಾರ್ಯವಿಧಾನ ತೃಪ್ತಿಕರವಲ್ಲವೆಂದು ಕಂಡು ಮಿತ್ರ ರಾಷ್ಟ್ರಗಳ ನಡುವೆ ಖಾಯಂ ರಾಜತಾಂತ್ರಿಕ ಸಂಪರ್ಕದ ಅಗತ್ಯ ಕಂಡುಬಂತು. ಮಧ್ಯಯುಗದ ಕೊನೆಯಲ್ಲಿ ವಿದೇಶಗಳ ರಾಜಧಾನಿಗಳಲ್ಲಿ ತಮ್ಮ ಖಾಯಂ ಪ್ರತಿನಿಧಿಗಳನ್ನು ನೇಮಿಸುವ ಸಂಪ್ರದಾಯಗಳನ್ನು ಆರಂಭಿಸಿದ ದೇಶಗಳಲ್ಲಿ ವೆನಿಸ್ ಮೊದಲನೇಯದು. ವೆನಿಸ್ ದೇಶದ ರಾಯಭಾರಿಗಳು ತಮ್ಮನ್ನು ಯಾವದೇಶಗಳಿಗೆ ಕಳುಹಿಸಲಾಗುತ್ತಿತ್ತೋ ಅಂಥಾ ದೇಶಗಳ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕಳುಹಿಸಿದ ವರದಿಗಳು ಐತಿಹಾಸಿಕ ಪರಿe್ಞÁನಕ್ಕೆ ಪ್ರಮುಖ ಆಕರಗಳಾಗಿವೆ. ಮುಂದೆ 17ನೆಯ ಶತಮಾನದ ಕೊನೆಯಲ್ಲಿ ರಾಜತಾಂತ್ರಿಕ ಪ್ರತಿನಿಧಿಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಯಿತು : 1) ಒಂದು ದೇಶಕ್ಕೆ ಕಳುಹಿಸಿಕೊಡುವ ಸಂಪೂರ್ಣಾಧಿಕಾರವುಳ್ಳ ರಾಯಭಾರಿಗಳು ಮತ್ತು ತತ್ಸಮಾನ ಶ್ರೇಣಿಯ ಉದ್ದಿಷ್ಟ ಕಾರ್ಯದ ಇತರ ಪ್ರತಿನಿಧಿಗಳು 2) ರಾಯಭಾರಿಗಳಿಗಿಂತ ಕಡಿಮೆ ದರ್ಜೆಯಪೂರ್ಣಾಧಿಕಾರಯುಕ್ತ ನಿಯೋಗಿಗಳು, ಸಚಿವರು ಮತು ರಾಜ್ಯ ಪ್ರಮುಖರಲ್ಲಿಗೆ ಕಳುಹಿಸುವ ಇತರ ಪ್ರತಿನಿಧಿಗಳು 3) ಆತಿಥೇಯ ರಾಷ್ಟ್ರದ ವಿದೇಶಾಂಗ ಸಚಿವರಿಗೆ ಒದಗಿಸಿರುವ ಉಪರಾಯಭಾರಿಗಳು.
ಸಾಮಾನ್ಯವಾಗಿ ಈಗ ಮುಖ್ಯ ಕಾರ್ಯನಿರ್ವಾಹಕರು, ಹಿಂದೆ ರಾಜರು ರಾಜತಾಂತ್ರಿಕ ಪ್ರತಿನಿಧಿಗಳನ್ನು ನೇಮಿಸುತ್ತಾರೆ. ರಾಜಕೀಯ ಅಥವಾ ಆರ್ಥಿಕ ಸಂಬಂಧಗಳನ್ನು ಹೊಂದಿರುವಂಥ ರಾಷ್ಟ್ರಗಳು ರಾಯಭಾರಿಗಳ ಮೂಲಕ ಪರಸ್ಪರರ ರಾಜಧಾನಿಗಳಲ್ಲಿ ಪ್ರತಿನಿಧಿತ್ವವನ್ನು ಪಡೆಯುತ್ತವೆ. ರಾಯಭಾರಿ ಹುದ್ದೆ ತೆರವಾಗಿದ್ದಾಗ ಅವನ ಕಾರ್ಯಗಳನ್ನು ಉಪರಾಯಭಾರಿ ನೋಡಿಕೊಳ್ಳುವುದುಂಟು. ಎರಡು ರಾಷ್ಟ್ರಗಳು ಪರಸ್ಪರ ಯುದ್ಧ ನಿರತವಾಗಿದ್ದಾಗ, ಸಾಮಾನ್ಯವಾಗಿ ತಟಸ್ಥ ದೇಶಗಳ ರಾಯಭಾರಿಗಳ ಮೂಲಕ ಅವರ ಆಸಕ್ತಿಗಳು ಪ್ರತಿನಿಧಿತವಾಗುತ್ತವೆ. ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದಾಗ ಬೇರೆ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಅವರ ಆಸಕ್ತಿಗಳನ್ನು ಪ್ರತಿನಿಧಿಸಬಹುದು.

ವಿಯನ್ನ ಒಪ್ಪಂದ ಮತ್ತು ಒಂದನೆಯ ಮಹಾಯುದ್ಧದ ನಡುವಣ ನೂರು ವರ್ಷಗಳು ಉತ್ಕøಷ್ಟ ರಾಯಭಾರನಿರ್ವಹಣ ಕೌಶಲದ ಉದಾಹರಣೆಯ ಅವಧಿ ಆಗಿತ್ತೆನ್ನಬಹುದು. ಟೆಲ್ಲಿರ್ಯಾಂಡ್ ಮೆಟರ್‍ನಿಕ್, ಕೆವೂರ್, ಬಿಸ್ಮಾರ್ಕ್, ಪಾಮರ್‍ಸ್ಟನ್ ಮತ್ತು ಸ್ಯಾಲಿಸ್ ಬರಿ ಎಂಬುವವರು ಆ ಕಾಲದ ಪ್ರಸಿದ್ಧ ರಾಯಭಾರಿಗಳು. 19ನೆಯ ಶತಮಾನದಲ್ಲಿ ಯೂರೋಪ್ ತನ್ನ ಉನ್ನತ ರಾಯಭಾರ ಕೌಶಲವನ್ನು ತೋರಿತು ಹಾಗೂ ಇದರ ಮೂಲಕ ಬಹಳಷ್ಟು ಕೆಲಸಗಳನ್ನು ಸಾಧಿಸಲಾಯಿತು. 19ನೆಯ ಶತಮಾನದಲ್ಲಿ ಪ್ಯಾರಿಸ್‍ನಲ್ಲಿ ಆಸ್ಟ್ರಿಯದ ರಾಯಭಾರಿ ಮೆಟರ್‍ನಿನ ಅಸಾಧಾರಣ ಸಾಮಥ್ರ್ಯದಿಂದಾಗಿ ಫ್ರಾನ್ಸ್ ಮತ್ತು ಆಸ್ಟ್ರಿಯ ದೇಶಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಸಾಧ್ಯವಾಯಿತು.

ರಷ್ಯದ ಕ್ರಾಂತಿ ಮುಂಗಾಣದಂಥ ಒಂದು ಅಂಶವನ್ನು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸೇರಿಸಿತು. ಲೆನಿನ್ ಮತ್ತು ಅವನ ಸಹಚರರು ಹೊಸ ರಾಯಭಾರ ಕೌಶಲ್ಯವನ್ನು ರೂಡಿಗೆ ತಂದರು. ಇದರಿಂದಾಗಿ ರಾಜತಾಂತ್ರಿಕ ಸಮಾಲೋಚನೆಗಳ ರಹಸ್ಯ ಮತ್ತು ಗೋಪ್ಯತೆ ಉಳಿಯದಂತಾಯಿತು. ಜಾಗತಿಕ ಮಹಾನ್ ಶಕ್ತಿಯಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಹೊರಹೊಮ್ಮಿದುದು, ಲ್ಯಾಟಿನ್ ಅಮೆರಿಕನ್ ರಾಜ್ಯಗಳು ಅದರಲ್ಲಿ ಭಾಗಿಗಳಾದುದು, ಏಷ್ಯ ದೇಶಗಳಿಗೆ ಸ್ವಾತಂತ್ರ್ಯ ಲಭಿಸಿದುದು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಇವೆಲ್ಲದರ ಪ್ರತಿಫಲನ ಯುರೋಪಿಯನ್ ರಾಜತಾಂತ್ರಿಕ ಏಕಸ್ವಾಮ್ಯ ತಪ್ಪಿಸಿದವು. ಆ ತರುವಾಯ ಎಲ್ಲ ದೇಶಗಳು ವಿಧಿಬದ್ದ ಸಮಾನತೆಯ ಸಿದ್ಧಾಂತದೊಂದಿಗೆ ಎಲ್ಲ ದೇಶಗಳಿಗೆ ರಾಯಭಾರಿ ಶ್ರೇಣಿಯ ಪ್ರತಿನಿಧಿಗಳನ್ನು ಕಳುಹಿಸಿದರು.
ಪ್ರಪಂಚದ ಎಲ್ಲಡೆ ವಿದೇಶಾಂಗ ಕಚೇರಿಗಳು, ರಾಜದೂತಾವಾಸಗಳು, ವಾಣಿಜ್ಯ ದೂತಾವಾಸಗಳು ಇತ್ಯಾದಿ ವ್ಯವಸ್ಥೆಯ ಮೂಲಕ ರಾಯಭಾರಿ ಕಾರ್ಯ ನಿರ್ವಹಿಸುತ್ತಿವೆ. ಈ ವ್ಯವಸ್ಥೆ ಉಭಯಪಕ್ಷೀಯ ಮತ್ತು ಬಹುಪಕ್ಷೀಯ ಸ್ವರೂಪ ಹೊಂದಿವೆ. ಇವುಗಳಲ್ಲಿ ಮೊದಲನೆಯ ಉಭಯ ಪಕ್ಷೀಯ ಸ್ವರೂಪ ಪರಂಪರಾಗತವಾಗಿ ಜನಪ್ರಿಯವಾದುದು. ಎರಡನೆಯ ಬಹುಪಕ್ಷೀಯ ಸ್ವರೂಪ ಆಧುನಿಕಕಾಲದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಗಳು ಮತ್ತು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ಫಲವಾಗಿ ರೂಪುಗೊಂಡಿರುತ್ತವೆ.

ರಾಯಭಾರಿಗಳು ಹಾಗೂ ಅದಕ್ಕೆ ಸಂಬಂಧಿಸಿದವರು ಅನುಭವಿಸುವ ರಕ್ಷಣೆ ಅವರು ಇರುವ ರಾಷ್ಟ್ರದ ಕ್ಷೇತ್ರಾಧಿಕಾರವನ್ನು ರೂಪಿಸುತ್ತದೆ. ಇಂಥ ರಕ್ಷಣೆಗಳನ್ನು ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಕಾನೂನು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ವಿಯನ್ನ ಒಪ್ಪಂದ (1961) ನಿಯಂತ್ರಿಸುತ್ತದೆ. ಈ ವಿಯನ್ನ ಒಪ್ಪಂದದ ಮೇರೆಗೆ ಮುಖ್ಯವಾಗಿ ರಾಯಭಾರಿಗಳು, ರಾಜದೂತರು, ಉಪ ರಾಯಭಾರಿಗಳು ಮತ್ತು ಅವರ ಕುಟುಂಬಗಳಿಗೆ ಅತಿಥಿ ದೇಶಗಳ ಅಪರಾಧಿಕ ಕ್ಷೇತ್ರಾಧಿಕಾರದಿಂದ ರಕ್ಷಣೆಯನ್ನು ಪಡೆದುಕೊಂಡಿರುತ್ತದೆ. ಮತ್ತು ಚಿಕ್ಕಪುಟ್ಟ ಅಪವಾದಗಳೊಂದಿಗೆ ಅದರ ವ್ಯವಹಾರಾಧಿಕಾರದಿಂದ ವಿನಾಯಿತಿಯನ್ನು ಪಡೆದಿರುತ್ತದೆ. ಒಂದು ರಾಜತಾಂತ್ರಿಕ ಉದ್ದಿಷ್ಟಕಾರ್ಯ ನಿರ್ವಹಿಸುವ ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿ ಸದಸ್ಯರಿಗೂ ಸ್ವಲ್ಪ ಕಡಿಮೆ ಪ್ರಮಾಣದ್ದಾದರೂ ಅದೇ ರೀತಿಯ ರಕ್ಷಣೆಗಳು ದೊರೆಯುತ್ತವೆ. ರಾಜನೀತಿಜ್ಞರ ಗೃಹ ಸಿಬ್ಬಂದಿ ಮತ್ತು ಮೋಟರು ವಾಹನ ಚಾಲಕರಿಗೆ ತಮ್ಮ ಕರ್ತವ್ಯ ನಿರ್ವಹಣ ಕಾಲದಲ್ಲಿ ನಡೆಸಿದ ಕೃತ್ಯಗಳಿಗೆ ರಕ್ಷಣೆಯಿರುತ್ತದೆ. ಆದರೆ ಅವರು ಆ ದೇಶದ ರಾಷ್ಟ್ರೀಯ ಪ್ರಜೆಗಳಾಗಿರತಕ್ಕದ್ದಲ್ಲ ಮತ್ತು ಆತಿಥೇಯ ರಾಷ್ಟ್ರದ ಖಾಯಂ ನಿವಾಸಿಗಳೂ ಆಗಿರತಕ್ಕದ್ದಲ್ಲ. ವಿಯನ್ನ ಒಪ್ಪಂದಕ್ಕೆ ಸಹಿ ಹಾಕದೇ ಇದ್ದವರಿಗೆ ಅತ್ಯಂತ ಸೀಮಿತ ರಕ್ಷಣೆಗಳನ್ನು ನೀಡಬಹುದು.

ಆಧುನಿಕ ಸಂಪರ್ಕ ಸಾಧನಗಳು ಮತ್ತು ತಂತ್ರe್ಞÁನ ಅಭಿವೃದ್ಧಿಗೊಳ್ಳುವ ಮೊದಲು ರಾಜತಾಂತ್ರಿಕರಿಗೆ ಹೆಚ್ಚು ಅಧಿಕಾರಗಳನ್ನು ಕೊಡಲಾಗುತ್ತಿತ್ತು. ಇವರು ಆಯಾದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸೇನೆಯ ಸ್ಥಿತಿ ಗತಿಗಳನ್ನು ತಮ್ಮ ತಾಯಿನಾಡಿನ ಕಛೇರಿಗಳಿಗೆ ವರದಿಮಾಡುವುದು, ತಮ್ಮನ್ನು ಕಳುಹಿಸಿದ ಮತ್ತು ಆತಿಥೇಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳಿಗೆ ತಮ್ಮ ರಾಷ್ಟ್ರ ಸಂದೇಶಗಳನ್ನು ತಲುಪಿಸುವುದು, ವಿದೇಶಗಳಲ್ಲಿರುವ ತಮ್ಮ ರಾಷ್ಟ್ರೀಯರಿಗೆ ಮತ್ತು ಅವರ ಆಸ್ತಿಪಾಸ್ತಿಗಳಿಗೆ ರಕ್ಷಣೆ ನೀಡುವುದು, ಸಾಂಪ್ರದಾಯಿಕ ಮತ್ತು ಸಾಮಾಜಿಕ ಸಂತೋಷಕೂಟಗಳಲ್ಲಿ ಭಾಗವಹಿಸುವುದು ಈ ಮೂಲಕ ತಮ್ಮ ದೇಶದ ಸಾಂಕೇತಿಕ ಪ್ರಾತಿನಿಧ್ಯ ತೋರುವುದು, ತಮ್ಮ ದೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಉತ್ಸವಾದಿಗಳಲ್ಲಿ ಹಾಜರಿರುವುದು, ಪಾನಕೂಟಗಳಲ್ಲಿ ಮಾಹಿತಿ ಸಂಗ್ರಹಿಸುವುದು ಮತ್ತು ಅಂಥ ಮಾಹಿತಿಗಳನ್ನು ತಾಯಿನಾಡಿಗೆ ಕಳುಹಿಸುವುದು, ಗುರಿಗಳನ್ನು ಮತ್ತು ಯೋಜನೆಗಳನ್ನು ಹಾಗೂ ಒಟ್ಟು ಕಾರ್ಯನೀತಿಗಳನ್ನು ಸೂತ್ರೀಕರಿಸುವಂಥವರಿಗೆ ಸಲಹೆ ನೀಡುವುದು, ವಿದೇಶಿ ಸರ್ಕಾರಗಳೊಂದಿಗೆ ತಮ್ಮ ಸರ್ಕಾರದ ನಿರ್ಣಯಗಳನ್ನು ಕಾರ್ಯಗತಗೊಳಿಸುವುದೇ ಮುಂತಾದವುಗಳು ಇವರು ನಿರ್ವಹಿಸಬೇಕಾದ ಕಾರ್ಯಗಳಾಗಿರುತ್ತದೆ.

ಇಂದು ರಾಯಭಾರ ನಿರ್ವಾಹಕರು ಅಂತಾರಾಷ್ಟ್ರೀಯ ಬಾಹುಳ್ಯ ಸ್ಥಾನವನ್ನು ಪಡೆದಿದ್ದರೂ ಸಾರಿಗೆ ಸಂಪರ್ಕ, ತಂತಿ, ದೂರವಾಣಿ, ವಾಯುಯಾನ ಇತ್ಯಾದಿಗಳಲ್ಲಿ ಆದ ಪ್ರಗತಿಗಳಿಂದಾಗಿ ಸರ್ಕಾರಗಳ ನಡುವಣ ಸಮ್ಮೇಳನಗಳು, ಶೃಂಗಸಭೆಗಳು, ಜನತೆ-ಜನತೆಗಳ ನಡುವೆ, ಸರ್ಕಾರ-ಸರ್ಕಾರಗಳ ನಡುವೆ, ಪ್ರಚಾರ ಮತ್ತು ಸಮೂಹಕ ಮಾಧ್ಯಮ, ಮಿಲಿಟರಿ ಮುಂತಾದವುಗಳಲ್ಲಿ ಸಂಪರ್ಕ ಹಾಗೂ ವಿಚಾರ ವಿನಿಮಯ ಸುಲಭವಾಗಿ ರಾಜತಾಂತ್ರಿಕ ಪ್ರಾಮುಖ್ಯತೆಯನ್ನು ತಗ್ಗಿಸಿವೆ. ಇಂದು ರಾಯಭಾರಿಗಳು ತಮ್ಮ ವಿದೇಶಾಂಗ ಕಚೇರಿಗಳ ವಕ್ತಾರರಾಗಿರುತ್ತಾರೆ. ಮತ್ತು ಒಬ್ಬ ರಾಯಭಾರಿ ಸ್ವಂತ ವಿವೇಚನೆಯಿಂದ ತನ್ನ ಮನವೊಪ್ಪುವಂತೆ ತೀರ್ಮಾನಿಸುವ ಸ್ವಾತಂತ್ರ್ಯವನ್ನು ಅಷ್ಟಾಗಿ ಹೊಂದಿಲ್ಲವೆನ್ನಬಹುದು.
(ಎಂ.ಐ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ